Cinibuzz Kannada

Cinibuzz Kannada ಕನ್ನಡ ಸಿನಿಮಾ ನ್ಯೂಸ್ | ಮೂವಿ ಅಪ್‌ಡೇಟ್ಸ್ | ಸೆಲಿಬ್ರಿಟಿ ಇಂಟರ್ವ್ಯೂಸ್ | ರೀಲ್ಸ್ ಮತ್ತು ವಿಡಿಯೋಸ್ Cinibuzz ನಿಮ್ಮ ಸಿನಿಮಾ ಹಬ್|
ಪ್ರಮೋಷನ್ ಗಾಗಿ ಸಂಪರ್ಕಿಸಿ -9019661474

ಕನ್ನಡ ಸಿನಿಮಾ ನ್ಯೂಸ್ | ಮೂವಿ ಅಪ್‌ಡೇಟ್ಸ್ | ಸೆಲಿಬ್ರಿಟಿ ಇಂಟರ್ವ್ಯೂಸ್ | ರೀಲ್ಸ್ ಮತ್ತು ವಿಡಿಯೋಸ್ Cinibuzz ನಿಮ್ಮ ಸಿನಿಮಾ ಹಬ್|
ಪ್ರಮೋಷನ್ ಗಾಗಿ ಸಂಪರ್ಕಿಸಿ -9900000579

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬೈಲಾ ಬಂಡಾಯ! ಏನಿದು ಅನ್ಯಾಯಬಹುಶಃ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರೆಸ್ಕ್ಲಬ್‌ ಅಂಗಳಕ್ಕೆ ಪೊಲೀಸರ ಪಹರ...
20/09/2026

ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬೈಲಾ ಬಂಡಾಯ!
ಏನಿದು ಅನ್ಯಾಯ

ಬಹುಶಃ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಪ್ರೆಸ್ಕ್ಲಬ್‌ ಅಂಗಳಕ್ಕೆ ಪೊಲೀಸರ ಪಹರೆ ಬಿದ್ದಿದೆ. ಇಡೀ ಪತ್ರಕರ್ತ ಸಮುದಾಯ ಹಾಲಿ ಇರುವ ಕಮಿಟಿ ವಿರುದ್ಧ ಯುದ್ಧ ಸಾರಿದೆ… ಈ ಕುರಿತ ಸರಣಿಯ ವರದಿಯ ಮೊದಲ ಕಂತು ಇಲ್ಲಿದೆ….
***
ರಾಜಧಾನಿ ಬೆಂಗಳೂರಿನ ಹಸಿರು ವನ ಕಬ್ಬನ್ ಪಾರ್ಕ್‌ನ ಮಡಿಲಲ್ಲಿ, ವಿಧಾನಸೌಧ, ರಾಜಭವನ ಮತ್ತು ಹೈಕೋರ್ಟ್‌ಗಳ ಆಯಕಟ್ಟಿನ ನೆರಳಲ್ಲೇ ಪ್ರತಿಷ್ಟಾಪನೆಗೊಂಡ ಸಂಸ್ಥೆ ಬೆಂಗಳೂರು ಪ್ರೆಸ್ ಕ್ಲಬ್ . 1960ರ ದಶಕದ ಉತ್ತರಾರ್ಧದಲ್ಲಿ ಪತ್ರಿಕಾರಂಗದ ಧೀಮಂತ ಚೇತನಗಳಾದ ಕೆ. ಎ. ನೆಟ್ಟಕಲ್ಲಪ್ಪ ಹಾಗೂ ಪ್ರಖರ ಪತ್ರಕರ್ತ ಟಿ. ಎಸ್. ರಾಮಚಂದ್ರರಾವ್ ಅವರಂತಹ ಮಹನೀಯರು, ಪತ್ರಕರ್ತರಲ್ಲಿ ವೃತ್ತಿಪರ ಒಗ್ಗಟ್ಟು ಮೂಡಿಸಲು, ಪರಸ್ಪರ ಮುಕ್ತ ಸಂವಾದ ಬೆಳೆಸಲು ಮತ್ತು ಸುದ್ದಿ ಮೂಲಗಳನ್ನು ದಿಟ್ಟವಾಗಿ ಎದುರುಗೊಳ್ಳಲು ಕಟ್ಟಿದ ಪ್ರಜಾಸತ್ತಾತ್ಮಕ ಶಕ್ತಿಕೇಂದ್ರವಿದು. ದಿನನಿತ್ಯ ರಾಜ್ಯ-ದೇಶದ ರಾಜಕೀಯ ಆಗುಹೋಗುಗಳನ್ನು ಜಗತ್ತಿಗೆ ಸಾರುವ ಪತ್ರಿಕಾಗೋಷ್ಠಿಗಳು, ಮುಖ್ಯಮಂತ್ರಿಗಳಿಂದ ಹಿಡಿದು ಸಾಹಿತ್ಯ, ಸಿನಿಮಾ, ಸಮಾಜದ ಗಣ್ಯರವರೆಗೂ ಮುಖಾಮುಖಿಯಾಗುವ ನೇರ ಸಂವಾದಗಳು, ಪ್ರತಿಷ್ಠಿತ 'ವರ್ಷದ ವ್ಯಕ್ತಿ' ಪ್ರಶಸ್ತಿ ಸೇರಿದಂತೆ ಅಪ್ರತಿಮ ಪತ್ರಕರ್ತರಿಗೆ ಗೌರವ ಸಲ್ಲಿಸುವ ಮೂಲಕ, ಮುದ್ರಣ ಮಾಧ್ಯಮದಿಂದ ಇಂದಿನ ಡಿಜಿಟಲ್ ಯುಗದವರೆಗೂ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಪ್ರಮುಖ ಕೊಂಡಿಯಾಗಿ ಈ ವೇದಿಕೆ ಇತಿಹಾಸದುದ್ದಕ್ಕೂ ಮೆರೆದಿದೆ. ಆದರೆ, ಇಡೀ ನಾಡಿಗೆ ನೀತಿಪಾಠ ಹೇಳುವ, ರಾಜಕಾರಣಿಗಳ ಭ್ರಷ್ಟಾಚಾರವನ್ನು ಬೆತ್ತಲೆ ಮಾಡುವ, ಸಂವಿಧಾನ ಮತ್ತು ಕಾನೂನಿನ ಬಗ್ಗೆ ಗಂಟಲು ಹರಿದುಕೊಳ್ಳುವ ಪತ್ರಕರ್ತರ ಸ್ವಂತ ಮನೆಯಲ್ಲೇ ಈಗ ಪ್ರಜಾಪ್ರಭುತ್ವಕ್ಕೆ ಎಳ್ಳುನೀರು ಬಿಡಲಾಗಿದ್ದು, ಹೆಮ್ಮೆಯ ತಾಣ ಇಂದು ಕೆಲವೇ ಕೆಲವು ಸ್ವಾರ್ಥಿಗಳ, ಅಧಿಕಾರದಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಗಬ್ಬೆದ್ದು ನಾರುತ್ತಿದೆ ಎನ್ನುವ ದೊಡ್ಡ ಮಟ್ಟದ ಆರೋಪಗಳು ಕೇಳಿಬರುತ್ತಿವೆ.

ʻʻಮೂಲ ಬೈಲಾ ಪ್ರಕಾರ ವರ್ಷಕ್ಕೊಮ್ಮೆ ಇಲ್ಲವೇ ನಿಯಮಬದ್ಧವಾಗಿ ಚುನಾವಣೆ ನಡೆದು ಹೊಸಬರಿಗೆ ಆಡಳಿತದ ಚುಕ್ಕಾಣಿ ಸಿಗಬೇಕಿದ್ದ ಸಂಸ್ಥೆಯಲ್ಲಿ, ಸದ್ಯ ಗದ್ದುಗೆ ಏರಿ ಕುಳಿತಿರುವ ಅಧ್ಯಕ್ಷ ಶ್ರೀಧರ್ ಮತ್ತು ಅವರ ಕೃಪಾಪೋಷಿತ ಮಂಡಳಿಗೆ ಕುರ್ಚಿಯ ವ್ಯಾಮೋಹ ನೆತ್ತಿಗೇರಿದೆ.ʼʼ ಅನ್ನೋದು ಸದ್ಯದ ವಿವಾದಕ್ಕೆ ಕಾರಣ!
ಪ್ರೆಸ್‌ಕ್ಲಬ್ಬನ್ನೇ ತಮ್ಮ ಖಾಸಗಿ ಜಹಗೀರು ಎಂಬಂತೆ ಆಳಲು ಹೊರಟಿರುವ ಇವರ ಅಧಿಕಾರದ ಹಪಹಪಿಗೆ ಕಳೆದ ಐದು ವರ್ಷಗಳು ಸಾಕ್ಷಿ ನುಡಿಯುತ್ತಿದೆ. ಸದ್ಯ ಬರೋಬ್ಬರಿ ಐದು ವರ್ಷಗಳ ಕಾಲ ಚುನಾವಣೆ ನಡೆಸದೆಯೇ ಕಾಲದೂಡಿದ್ದ ಇದೇ ಅಧ್ಯಕ್ಷರು, ಅಂದು ಸದಸ್ಯರಿಗೆ ಕೈಮುಗಿದು, 'ತಪ್ಪಾಗಿದೆ, ಎಲ್ಲವನ್ನೂ ಸರಿಪಡಿಸಿ ಕೊಡುತ್ತೇನೆ, ಒಂದೇ ಒಂದು ಅವಕಾಶ ಕೊಡಿ' ಎಂದು ಗೋಗರೆದು ಕನಿಕರ ಗಿಟ್ಟಿಸಿಕೊಂಡು ಮತ್ತೆ ಅಧಿಕಾರಕ್ಕೇರಿದ್ದರು. ಆದರೆ ಕುರ್ಚಿಯ ಮೇಲೆ ಹಾಲಿ ಆಡಳಿತ ಮಂಡಳಿ, ಚುನಾವಣೆ ನಡೆದು ಮೂರ್ನಾಲ್ಕು ವರ್ಷಗಳೇ ಉರುಳಿದರೂ, ನಿಗಧಿತ ಅವಧಿಯಲ್ಲಿ ಚುನಾವಣೆ ನಡೆಸದೆ ಸಮಯ ದೂಡುತ್ತಿದ್ದಾರೆ. ಸಾಲದೆಂಬಂತೆ, ಇನ್ನು ಮುಂದೆ ಐದು ವರ್ಷಕ್ಕೊಮ್ಮೆ ಮಾತ್ರ ಚುನಾವಣೆ ನಡೆಸುತ್ತೇವೆ ಎಂದು ಬೈಲಾ ತಿದ್ದುಪಡಿಯ ಅಡ್ಡದಾರಿ ಹಿಡಿದು, ಸತತ ಹತ್ತು ವರ್ಷಗಳ ಕಾಲ ತಾವೇ ಸರ್ವಾಧಿಕಾರಿಗಳಾಗಿ ಪ್ರೆಸ್‌ ಕ್ಲಬ್‌ ಅಂಗಳದಲ್ಲಿ ಪದ್ಮಾಸನ ಹಾಕಿ ಕೂರಲು ಹವಣಿಸುತ್ತಿದ್ದಾರೆ.

ಸಂಸ್ಥೆಯ ನಿಯಮಾವಳಿಯನ್ನೇ ಕಾಲಕಸ ಮಾಡಿಕೊಂಡಿರುವ ಈ ಕೂಟ, ವರ್ಷಕ್ಕೆ ಕೇವಲ 25 ಜನರಿಗೆ ನೀಡಬೇಕಿದ್ದ ಸದಸ್ಯತ್ವದ ಮಿತಿಯನ್ನು ಮೊದಲು 50ಕ್ಕೆ ಏರಿಸಿ, ಈಗಂತೂ ದುರಾಶೆಗೆ ಬಿದ್ದು ಬರೋಬ್ಬರಿ 130 ರಿಂದ 140 ಜನರಿಗೆ ಅಡ್ಡಾದಿಡ್ಡಿಯಾಗಿ ಸದಸ್ಯತ್ವ ಹಂಚಿ ಅಕ್ರಮದ ಗಂಜಿ ಕೇಂದ್ರ ಮಾಡಿಕೊಂಡಿದೆ. ಆಘಾತಕಾರಿ ಸಂಗತಿಯೆಂದರೆ, ಪತ್ರಿಕಾರಂಗಕ್ಕೂ ತಮಗೂ ಕಿಂಚಿತ್ತೂ ನಂಟಿಲ್ಲದ, ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಶಾಲಾ ಮಾಸ್ತರರು, ಕ್ರಿಮಿನಲ್‌ ಕೇಸುಗಳ ಆರೋಪಿಗಳು ಹಾಗೂ ಮಠಾಧೀಶರು, ಶಾಖಾ ಸ್ವಾಮೀಜಿಗಳಿಗೆಲ್ಲ ಪ್ರೆಸ್‌ಕ್ಲಬ್‌ನ ಸದಸ್ಯತ್ವವನ್ನು ಅಕ್ರಮವಾಗಿ ಹಂಚಲಾಗಿದೆ. ಬೆಂಗಳೂರಿನ ಹೊರತು ಪಡಿಸಿ, ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಪತ್ರಕರ್ತರಿಗೂ ಬೆಂಗಳೂರು ಪ್ರೆಸ್‌ ಕ್ಲಬ್‌ ಸದಸ್ಯತ್ವ ನೀಡಿ ಮತಬ್ಯಾಂಕ್‌ ಸೃಷ್ಟಿಸಿಕೊಂಡಿದ್ದಾರೆ. ಇದರ ಹಿಂದೆ ಹಣಕಾಸಿನ ವಹಿವಾಟುಗಳು ನಡೆದಿವೆ ಎಂಬ ಆಪಾದನೆಗಳು ಸಾಮಾಜಿಕ ತಾಣಗಳಲ್ಲಿ ಸುದ್ದಿ ಹರಿದಾಡುತ್ತಿವೆ. ಹ ಜಿಲ್ಲಾ ಪತ್ರಕರ್ತರು ಬಂದು ಸಮಾಜವನ್ನು ಎಚ್ಚರಿಸಬೇಕಾದ ಪತ್ರಕರ್ತರ ಕ್ಲಬ್ಬಿನಲ್ಲಿ ಕುಳಿತು ಸ್ವಾಮೀಜಿಗಳು ಮತ್ತು ಕೇಸುಗಳ ಆರೋಪಿಗಳು, ಹೊರಜಿಲ್ಲೆಯ ಪತ್ರಕರ್ತರು, ಸಂಪಾದಕರು ಏನು ವರದಿ ಮಾಡಬೇಕಿದೆ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರೂ ಕೇಳುವಂತಾಗಿದೆ. ಹಾಲಿ ಆಡಳಿತ ಮಂಡಳಿ ನೀಡಿರುವ ಸದಸ್ಯತ್ವಗಳನ್ನು ಅಮಾನತಿನಲ್ಲಿಟ್ಟು, ಸರ್ವ ಸದಸ್ಯರ ಸಭೆಗೆ ಆಹ್ವಾನ ನೀಡದೇ ಚುನಾವಣೆ ನಡೆಸಿದರೆ ಮಾತ್ರ, ಪಾರದರ್ಶಕವಾಗಿ ಹೊಸ ಕಮಿಟಿ ಆಯ್ಕೆ ಆಗಲು ಸಾಧ್ಯ. ಇಲ್ಲದಿದ್ದಲಿ, ಯಾವ ಅನ್ಯಾಯ ನಡೆಯಬಾರದೋ ಅದು ಅಕ್ಷರಶಃ ಅಚ್ಚುಕಟ್ಟಾಗಿ ನೆರವೇರಲಿದೆ!

ಒಟ್ಟಾರೆ ಈ ಅನ್ಯಾಯ ಮತ್ತು ಅಧಿಕಾರ ವಿಸ್ತರಣೆಯ ಹುನ್ನಾರದ ವಿರುದ್ಧ ಇಡೀ ಕ್ಲಬ್ಬೇ ಮೂಕಪ್ರೇಕ್ಷಕನಾಗಿದ್ದ ಹೊತ್ತಿನಲ್ಲಿ, ಹಿರಿಯ ಪತ್ರಕರ್ತ ಲಕ್ಷ್ಮೀ ಸಾಗರಸ್ವಾಮಿ ಗೌಡ ಕೆಂಡಾಮಂಡಲವಾಗಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿ (WP No. 29549/2026) ರಾಜ್ಯ ಸರ್ಕಾರ ಹಾಗೂ ಪ್ರೆಸ್ ಕ್ಲಬ್ ಆಡಳಿತದ ವಿರುದ್ಧ ನೇರ ಕಾನೂನು ಸಮರ ಸಾರಿದ್ದಾರೆ.

ಅರ್ಜಿಯ ಗಂಭೀರತೆಯನ್ನು ಪರಿಗಣಿಸಿ ತುರ್ತು ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಏಕಸದಸ್ಯ ಪೀಠ, ಆಡಳಿತ ಮಂಡಳಿಯ ಕಿವಿಯನ್ನು ಹಿಂಡಿ ಅತ್ಯಂತ ಖಡಕ್ ಆದ ಮೌಖಿಕ ಆದೇಶವನ್ನು ಹೊರಡಿಸಿದೆ. ಅರ್ಜಿದಾರರ ಪರ ವಕೀಲರು ನ್ಯಾಯಪೀಠದ ಮುಂದೆ ವಾಸ್ತವವನ್ನು ಬೆತ್ತಲೆ ಮಾಡುತ್ತಾ, 2026ರ ಸೆಪ್ಟೆಂಬರ್ 20ರ ಇಂದು ನಿಗದಿಯಾಗಿರುವ ವಿಶೇಷ ಮಹಾಸಭೆಯಲ್ಲಿ ಹಾಲಿ ಆಡಳಿತ ಮಂಡಳಿಯ ಅವಧಿಯನ್ನೇ ಅಕ್ರಮವಾಗಿ ವಿಸ್ತರಿಸುವ ಹಾಗೂ ಸನ್ನಿಹಿತವಾಗಿರುವ ಹೊಸ ಚುನಾವಣೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ವ್ಯವಸ್ಥಿತ ಹುನ್ನಾರ ಅಡಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿಗಳು, ಸೆಪ್ಟೆಂಬರ್ 20ರ ಆಕ್ಷೇಪಾರ್ಹ ವಿಶೇಷ ಮಹಾಸಭೆಯಲ್ಲಿ ಆಡಳಿತ ಮಂಡಳಿ ಬೈಲಾ ಬದಲಾಯಿಸಿ ಏನೇ ತೀರ್ಮಾನಗಳನ್ನು ಕೈಗೊಂಡರೂ, ಆ ಎಲ್ಲಾ ನಿರ್ಧಾರಗಳೂ ಈ ರಿಟ್ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಕಡ್ಡಿ ಮುರಿದಂತೆ ಆದೇಶಿಸಿ ಎಚ್ಚರಿಕೆಯ ಚಾಟಿ ಬೀಸಿದ್ದಾರೆ. ಜೊತೆಗೆ ಸರ್ಕಾರದ ಪರ ವಕೀಲರಿಗೆ ನೋಟಿಸ್ ನೀಡಿ, ನಾಲ್ಕನೇ ಪ್ರತಿವಾದಿಗೆ ತುರ್ತು ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯವು ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಅಕ್ಟೋಬರ್ 26ಕ್ಕೆ ನಿಗದಿಪಡಿಸಿದೆ.

ಈ ಬೆಳವಣಿಗೆಯಿಂದಾಗಿ ಮಹಾಸಭೆಯಲ್ಲಿ ತಮಗೆ ಬೇಕಾದಂತೆ ಕಾಯ್ದೆ-ಕಾನೂನುಗಳನ್ನು ತಿದ್ದುಪಡಿ ಮಾಡಿಕೊಂಡು, ಠರಾವು ಪಾಸು ಮಾಡಿ ಅಧಿಕಾರದ ರುಚಿ ಸವಿಯಲು ಕನಸು ಕಾಣುತ್ತಿದ್ದ ಪ್ರಸ್ತುತ ಪದಾಧಿಕಾರಿಗಳಿಗೆ ಗಂಟಲಲ್ಲಿ ನಲ್ಲಿ ಮೂಳೆ ಸಿಕ್ಕಿಕೊಂಡಂತಾಗಿದೆ. ಸಭೆಯಲ್ಲಿ ಗದ್ದಲದ ನಡುವೆ ಕೈಯೆತ್ತಿಸಿ ಕಾನೂನಿನ ಕಣ್ಣಿಗೆ ಮಣ್ಣೆರಚಬಹುದು ಎಂಬ ಇವರ ಲೆಕ್ಕಾಚಾರಕ್ಕೆ ಹೈಕೋರ್ಟ್‌ನ ಈ ಷರತ್ತು ಭಾರೀ ಬ್ರೇಕ್ ಹಾಕಿದೆ. ಪತ್ರಿಕೋದ್ಯಮದ ಮೂಲ ಉದ್ದೇಶ, ನೈತಿಕತೆ ಮತ್ತು ಸಂಸ್ಥೆಯ ಪಾವಿತ್ರ್ಯವನ್ನು ಗಾಳಿಗೆ ತೂರಿ, ಕ್ಲಬ್ ಅನ್ನು ತಮ್ಮ ಜಹಗೀರು ಎಂಬಂತೆ ನಡೆಸಿಕೊಳ್ಳಲು ಯತ್ನಿಸಿದವರ ವಿರುದ್ಧ ಕೆಂಡಾಮಂಡಲವಾಗಿರುವ ಪತ್ರಕರ್ತರು, "ಇಡೀ ಸಮಾಜಕ್ಕೆ ಕನ್ನಡಿ ಹಿಡಿಯುವ ಪತ್ರಕರ್ತರ ಸಂಸ್ಥೆಯಲ್ಲೇ ಇಂತಹ ಸರ್ವಾಧಿಕಾರಿ ಧೋರಣೆಗಳನ್ನು ಸಹಿಸಲು ಸಾಧ್ಯವಿಲ್ಲ; ಪ್ರಜಾಸತ್ತಾತ್ಮಕ ಮೌಲ್ಯಗಳಂತೆ ನಿಗದಿತ ಅವಧಿಗೆ ಚುನಾವಣೆ ನಡೆದೇ ತೀರಬೇಕು" ಎಂದು ಸಮರ ಸಾರಿದ್ದಾರೆ. ಒಟ್ಟಿನಲ್ಲಿ, ಐತಿಹಾಸಿಕ ಪ್ರೆಸ್ ಕ್ಲಬ್‌ನ ಅಂಗಳದಲ್ಲಿ ಹೊತ್ತಿಕೊಂಡಿರುವ ಈ ಬೈಲಾ ಬಂಡಾಯ ಮತ್ತು ಸದಸ್ಯತ್ವ ಹಂಚಿಕೆಯ ಕರಾಳ ದಂಧೆಯ ಕಿಡಿ, ಅಕ್ಟೋಬರ್ 26ರ ಹೈಕೋರ್ಟ್ ವಿಚಾರಣೆಯ ಹೊತ್ತಿಗೆ ಆಡಳಿತ ಮಂಡಳಿಯನ್ನು ಯಾವ ಕಟಕಟೆಯಲ್ಲಿ ನಿಲ್ಲಿಸಲಿದೆ ಎಂಬುದನ್ನು ಇಡೀ ಮಾಧ್ಯಮ ಲೋಕವೇ ಬೆರಗುಗಣ್ಣಿನಿಂದ ನೋಡುತ್ತಿದೆ.

-ಅರುಣ್ ಕುಮಾರ್ ಜಿ

ಇದು ಬರಿಯ ಬೆಳಕಲ್ಲ… ಕರಾಳ ಜಗತ್ತಿನ ಅನಾವರಣ….ದಿಕ್ಕು ದೆಸೆಯಿಲ್ಲದೆ ಎತ್ತೆತ್ತಲೋ ಹರಡಿಕೊಂಡು ಬೆಳೆಯುತ್ತಿರುವ ಈ ಕಾಂಕ್ರೀಟ್ ಕಾಡು ಬೆಂಗಳೂರಿನ ...
18/09/2026

ಇದು ಬರಿಯ ಬೆಳಕಲ್ಲ…
ಕರಾಳ ಜಗತ್ತಿನ ಅನಾವರಣ….

ದಿಕ್ಕು ದೆಸೆಯಿಲ್ಲದೆ ಎತ್ತೆತ್ತಲೋ ಹರಡಿಕೊಂಡು ಬೆಳೆಯುತ್ತಿರುವ ಈ ಕಾಂಕ್ರೀಟ್ ಕಾಡು ಬೆಂಗಳೂರಿನ ಸೆಂಟರ್‌ ಪಾಯಿಂಟ್‌ನಂತಿರುವ ಏರಿಯಾ ಮೆಜೆಸ್ಟಿಕ್. ಈ ಕಾರಣಕ್ಕೋ ಏನೋ ಈ ಭಾಗಕ್ಕೆ ತುಂಬಾನೇ ದಾಹ, ತವಕ, ತಳಮಳ! ರಾತ್ರಿ ಹಗಲೆನ್ನದೆ ಮೈತುಂಬಾ ನೂಕುನುಗ್ಗಲು, ಕಿವಿಯೊಡೆಯುವ ಶಬ್ದ, ಧಾವಂತದ ಹೆಜ್ಜೆಗಳ ಗಿಜಿಗುಡುವ ಸಾಗರಕ್ಕೆ ಹೆಜ್ಜೆಯಿಟ್ಟಾಗ ಕಣ್ಣು ಕುಕ್ಕುವುದು ಮಾತ್ರ ಝಗಮಗಿಸುವ ನಿಯಾನ್ ದೀಪಗಳ ಬಣ್ಣದ ಬೆಳಕು. ಆದರೆ, ಆ ರಂಗುರಂಗಿನ ಬೆಳಕಿನ ಬೆನ್ನಹಿಂದೆಯೇ ಯಾರಿಗೂ ಕಾಣಿಸದ, ಕಂಡರೂ ಕಾಣದಂತೆ ಜಾರಿಕೊಳ್ಳುವ ಭೀಕರ ಕತ್ತಲೆಯ ಇನ್ನೊಂದು ಕರಾಳ ಜಗತ್ತಿದೆ. ಊರು, ಮನೆ, ನೆಂಟರಿಷ್ಟರನ್ನು ಕಳೆದುಕೊಂಡು ನಡುಬೀದಿಗೆ ಬಿದ್ದವರು, ಹಣೆಬರಹದ ಜೂಜಾಟದಲ್ಲಿ ಸರ್ವಸ್ವವನ್ನೂ ಕಳೆದುಕೊಂಡು ದಿಕ್ಕುತೋಚದೆ ನಿಂತವರು, ಬದುಕಿನ ನಾನಾ ಬಿರುಗಾಳಿಗೆ ಸಿಲುಕಿ ಕಳಚಿಬಿದ್ದವರೆಲ್ಲರೂ ಕಡೆಗೆ ಬಂದು ಮುಖಾಮುಖಿಯಾಗುವ ಕೊನೆಯ ನಿಲ್ದಾಣವೇ ಈ ಮೆಜೆಸ್ಟಿಕ್. ಅಪರಿಚಿತ ಮುಖಗಳ ಈ ಮಹಾಸಾಗರದಲ್ಲಿ ಯಾರೂ ಯಾರನ್ನೂ ಕಣ್ಣೆತ್ತಿ ನೋಡುವುದಿಲ್ಲ; ಆದರೂ ಎಲ್ಲೋ ಕಳೆದುಹೋದ ಅಸಹಾಯಕ ಜೀವಗಳೆಲ್ಲ ಇಲ್ಲಿನ ಒಂದೇ ಕತ್ತಲ ಗರ್ಭದೊಳಗೆ ನಿಶ್ಯಬ್ದವಾಗಿ ಬಂದು ಬೆರೆತುಹೋಗಿರುತ್ತವೆ.

ಈ ನಿರ್ದಯಿ ಬದುಕು ಮನುಷ್ಯನಿಂದ ಕಣ್ಣೀರನ್ನೂ ಬಿಡದಂತೆ ಎಲ್ಲವನ್ನೂ ಕಸಿದುಕೊಂಡು ಬೀದಿಗೆ ದಬ್ಬಿದಾಗ, ಪ್ರಪಂಚದ ಯಾವ ಬಾಗಿಲೂ ತೆರೆಯದ ಹೊತ್ತಿನಲ್ಲಿ ಈ ಒರಟು ಏರಿಯಾ ಮಾತ್ರ ಯಾರನ್ನೂ ಹೊರದಬ್ಬುವುದಿಲ್ಲ. ‘ಬದುಕಿಕೋ ಬಡಜೀವವೇ’ ಅಂತ ಎದೆಯುದ್ದದ ನಿಟ್ಟುಸಿರನ್ನೇ ಆಸರೆಯಾಗಿಸಿ, ಯಾವುದಾದರೊಂದು ಕಸುಬನ್ನು ಕರುಣಿಸುತ್ತದೆ. ಅದು ಯಾಥರದ್ದಾದರೂ ಆಗಬಹುದು! ಒಟ್ಟಿನಲ್ಲಿ ಸಾಯಲು ಬಿಡದೆ ಹೊಟ್ಟೆಗೆ ಹಿಡಿ ಅನ್ನ ಕೊಟ್ಟು ಬದುಕಿಸಿಕೊಳ್ಳುವ ಅದ್ಭುತ ತಾಕತ್ತು ಬೀದಿಗಳಿಗಿದೆ. ಜಾತಿ, ಮತ, ಮಾನ, ಮರ್ಯಾದೆಗಳೆಲ್ಲ ಕಳಚಿಬಿದ್ದ ಮೇಲೆ ಬರೀ ಹಸಿವಷ್ಟೇ ಉಳಿದುಕೊಂಡಾಗ, ಆ ಹಸಿವಿಗೆ ದ್ರೋಹ ಬಗೆಯದೆ ಅನ್ನ ಹಾಕುವ ತಾಯಿ ಈ ಮೆಜೆಸ್ಟಿಕ್. ಈ ನೆಲದ ಅತಿ ದೊಡ್ಡ ಶಾಪವೆಂದರೆ, ಇಲ್ಲಿ ಬಿಕರಿಯಾಗುವ ಸರಕುಗಳ ನಡುವೆ ನೆಮ್ಮದಿಯೆಂಬುದು ಮಾತ್ರ ಸಿಗುವುದೇ ಇಲ್ಲ. ಹೌದು, ನೆಮ್ಮದಿಯೊಂದನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಮನುಷ್ಯ ಬಯಸುವ, ಕಲ್ಪಿಸಿಕೊಳ್ಳುವ ಮಿಕ್ಕೆಲ್ಲವೂ ಇಲ್ಲಿನ ಅಂಗಡಿಮುಂಗಟ್ಟುಗಳಲ್ಲಿ, ಫುಟ್ಪಾತ್ಗಳ ಮೇಲೆ, ಕತ್ತಲ ಗಲ್ಲಿಗಳಲ್ಲಿ, ಇರುಕಿನ ಮೂಲೆಗಳಲ್ಲಿ ಸಲೀಸಾಗಿ ಬಿಕರಿಯಾಗುತ್ತದೆ. ದೇಹದ ಬೆವರಿನಿಂದ ಹಿಡಿದು ಅಗ್ಗದ ಸುಖದವರೆಗೆ, ಕಣ್ಣು ಕುಕ್ಕುವ ವಸ್ತುವಿನಿಂದ ಹಿಡಿದು ಕ್ಷಣಿಕ ನಶೆಯವರೆಗೆ ಎಲ್ಲವೂ ಇಲ್ಲಿ ಚೌಕಾಶಿ ವ್ಯಾಪಾರಕ್ಕಿಳಿದುಬಿಡುತ್ತವೆ.

ಚೆಲ್ಲಾಪಿಲ್ಲಿಯಾದ ಬದುಕಿನ ಎಷ್ಟೊಂದು ಚೂರುಗಳನ್ನೆಲ್ಲಾ ಸೇರಿಸಿ ಅದಕ್ಕೊಂದು ಹೆಸರಿಟ್ಟಿದ್ದಾರೆ. ಅದು ‘ಸಿಟಿ ಲೈಟ್ಸ್’! ಎಲ್ಲೆಲ್ಲಿಂದಲೋ ಬಂದವರ ಕಥೆ ಸಿನಿಮಾ ರೂಪಕ್ಕಿಳಿದಿರುವುದು ಇದೇ ಮೊದಲೇನಲ್ಲ. ಆದರೆ ನಿರ್ದೇಶಕ ದುನಿಯಾ ವಿಜಯ್ ಕುಮಾರ್ ಅದನ್ನೊಂದು ಚೌಕಟ್ಟಿನೊಳಗೆ ಕೂರಿಸಿ ರೂಪ ಕೊಡುವ ಪ್ರಯತ್ನವನ್ನಷ್ಟೇ ಮಾಡಿದ್ದಾರೆ. ಕೆಲಸ ಹುಡುಕಿಕೊಂಡು ಬಂದು ಹೊಟೇಲಿಗೆ ಸೇರುವ ಶಿವು, ಕಳೆದುಹೋದ ತಮ್ಮನನ್ನು ಹುಡುಕಿಕೊಂಡು ಬರುವ ಅಕ್ಕ, ಅವಳನ್ನು ಗಬಕ್ಕನೆ ಹಿಡಿದುಹಾಕಿಕೊಂಡ ಮಾನಗೆಟ್ಟವರ ಜಾಲ, ಅವರಿಂದ ಅವಳನ್ನು ಮುಕ್ತಿ ಕೊಡಿಸಲು ಬಯಸುವ ಕಳೆದುಕೊಂಡವರ ಕೂಟ. ಬದುಕಲು ಏನನ್ನು ಬೇಕಾದರೂ ಮಾಡುವ ರೌಡಿಗಳು, ಅವರನ್ನು ಸಾಕುನಾಯಿಗಳಂತೆ ಬೆಳೆಸಿಕೊಂಡ ರಾಜಕಾರಣಿ, ಎಂಜಲು ನೆಕ್ಕುವ ಪೊಲೀಸರು, ಹಾದಿ ಬಿಟ್ಟವರು, ಎಲ್ಲವನ್ನೂ ತೊರೆದು ಉತ್ತಮರಾದವರು, ವಿಕೃತರು, ಚಪರಾಸಿಗಳು, ಪರಸಂಗಿಗಳು, ಲೈಂಗಿಕ ಅಲ್ಪಸಂಖ್ಯಾತರು… ಹೀಗೆ ಒಂದಕ್ಕೊಂದು ಬೆಸೆದುಕೊಂಡ ಸರಪಳಿಯನ್ನು ಪರಿಚಯಿಸುವ ಸಿನಿಮಾವೇ ‘ಸಿಟಿ ಲೈಟ್ಸ್’.

ದುನಿಯಾ ವಿಜಯ್ ಅವರು ಈ ಹಿಂದಿನ ತಮ್ಮ ‘ಸಲಗ’ ಮತ್ತು ‘ಭೀಮ’ ಸಿನಿಮಾಗಳಲ್ಲಿ ಕೂಡಾ ಇಂಥದ್ದೇ ಕರಾಳ ಜಗತ್ತನ್ನು ಅನಾವರಣಗೊಳಿಸುವ ಕೆಲಸ ಮಾಡಿದ್ದಾರೆ. ಕಲಾವಿದರ ಜೊತೆಗೆ ಹೊಸಬರನ್ನು ಬೆರೆಸಿ, ಕಥೆ ಹೇಳುವ ಧಾಟಿ ಅವರಿಗೆ ಸಿದ್ಧಿಸಿದೆ. ‘ಸಿಟಿ ಲೈಟ್ಸ್’ನಲ್ಲೂ ಅಂಥದ್ದೊಂದು ಪ್ರಯತ್ನ ಮಾಡಿದ್ದಾರೆ. ಬೆಂಗಳೂರಿನ ಆತ್ಮಕಥೆಯನ್ನು ಬಿಡಿಬಿಡಿಯಾಗಿ ಬಿಡಿಸಿ, ಹೇಳುವ ಅವರ ಶೈಲಿ ಇಲ್ಲಿಯೂ ಯಥಾವತ್ತಾಗಿ ಮುಂದುವರಿದಿದೆ. ಆದರೆ, ಕಥೆಯ ಚೌಕಟ್ಟೇ ಬಿಗಿಯಾಗಿಲ್ಲದ ಕಾರಣ ಚಿತ್ರಕಥೆ ಕೂಡಾ ಅಲ್ಲಲ್ಲಿ ಸಡಿಲವಾಗಿದೆ. ಎಲ್ಲವನ್ನೂ ಹೇಳಿಬಿಡಬೇಕು ಎನ್ನುವ ಧಾವಂತ, ವೈವಿಧ್ಯತೆಯನ್ನು ಮೆರೆಸಬೇಕು ಎನ್ನುವ ತವಕದಲ್ಲಿ ಥೇಟು ಮೆಜೆಸ್ಟಿಕ್ ಏರಿಯಾದಂತೆಯೇ ‘ಸಿಟಿ ಲೈಟ್ಸ್’ ಚೂರು ಗಜಿಬಿಜಿಯಾಗಿದೆ! ಅಣ್ಣಮ್ಮನ ಜೊತೆಗೆ ಯಲ್ಲಮ್ಮ, ಮಾದೇಶ್ವರ ಎಲ್ಲರೂ ಸೇರಿಕೊಳ್ಳುವ ಅಗತ್ಯವಿರಲಿಲ್ಲ!!

ಚೂರು ಎಚ್ಚರ ವಹಿಸಿ ಹೊಸೆದಿದ್ದರೂ ತಮಿಳಿನ ಗೌತಮ್ ವಾಸುದೇವ ಮೆನನ್ ನಿರ್ದೇಶನದ ‘ವೆಂದು ತಣಿಂದದು ಕಾಡು’, ‘ಅಂಗಾಡಿ ತೇರು’ ಥರದ ಸಿನಿಮಾಗಳ ರೇಂಜಿಗೆ ‘ಸಿಟಿ ಲೈಟ್ಸ್’ ಕೂಡಾ ಬೆಳಗುತ್ತಿತ್ತು. ಆದರೆ ಅದು ಸಾಧ್ಯವಾಗಿಲ್ಲ..!

ಇವೆಲ್ಲದರ ನಡುವೆ ವಿನಯ್ ರಾಜ್ಕುಮಾರ್ ಅವರ ಅದ್ಭುತ ನಟನೆ ಎಲ್ಲವನ್ನೂ ಮರೆಸಿಬಿಡುತ್ತದೆ. ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ಕೂಡಾ ಮೊದಲ ಚಿತ್ರದಲ್ಲೇ ಪಳಗಿದ ನಟಿಯಂತೆ ಕಾಣಿಸಿಕೊಂಡಿದ್ದಾರೆ. ಉಮಾಶ್ರೀ ಅವರಂಥ ಕೆಲವೇ ಅನುಭವೀ ನಟರನ್ನು ಹೊರತುಪಡಿಸಿ, ಮಿಕ್ಕೆಲ್ಲಾ ಹೊಸ ಫೇಸುಗಳೇ. ಆದರೆ ಚಿತ್ರರಂಗಕ್ಕೆ ಇವರ್ಯಾರೂ ಹೊಸಬರಲ್ಲ. ಯುಗ ಚಂದ್ರು, ಪುನೀತ್, ವೀರ ಮುಂತಾದವರು ಚಳಿಯಿಲ್ಲದೇ ನಟಿಸಿದ್ದಾರೆ. ಇನ್ಸ್ಪೆಕ್ಟರ್ ಪಾತ್ರದಲ್ಲಿ ಫೈಟ್ ಮಾಸ್ಟರ್ ವಿನೋದ್ ಮಜವಾಗಿ ಅಭಿನಯಿಸಿದ್ದಾರೆ. ಸಂಪತ್ ಮೈತ್ರೇಯ ಮತ್ತು ಗೋಪಾಲ್ ದೇಶಪಾಂಡೆ ಅವರದ್ದಿಲ್ಲಿ ಗೆಸ್ಟ್ ಅಪಿಯರೆನ್ಸ್… ಪುನೀತ್ ಮತ್ತು ವೀರ ಮಾತ್ರ ಎಲ್ಲರೂ ಬೆಚ್ಚಿಬೀಳುವಂತೆ ನಟಿಸಿರುವುದು ನಿಜಕ್ಕೂ ಅಚ್ಛರಿಯ ವಿಚಾರ!

ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಎಂದಿನಂತೆ ಹೊಸತನದಿಂದ ಕೂಡಿದೆ. ಮೆಜೆಸ್ಟಿಕ್ನ ತಲ್ಲಣ, ಭಯ ಮತ್ತು ಅನಿಶ್ಚಿತತೆಯನ್ನು ತಮ್ಮ ಸಂಗೀತದ ಮೂಲಕ ಅನಾವರಣಗೊಳಿಸಿದ್ದಾರೆ. ಇಂಥಾ ಕಥಾವಸ್ತುಗಳನ್ನು ಸೆರೆ ಹಿಡಿಯೋದರಲ್ಲಿ ಬಹುಶಃ ಛಾಯಾಗ್ರಾಹಕ ಶಿವಸೇನಾ ಪಳಗಿದ್ದಾರೆ. ಎಲ್ಲವನ್ನೂ ನೈಜತೆಯ ಹೊಸ್ತಿಲಿಗೆ ತಂದು ನಿಲ್ಲಿಸೋದು ಇವರ ಕಲಾತ್ಮಕತೆ. ಆಯಾ ಕಾಲಘಟ್ಟಕ್ಕೆ ಅಪ್ಡೇಟ್ ಆಗುವ ಬೆಂಗಳೂರಿನ ಭಾಷೆಯನ್ನು ಬಳಸಿಕೊಂಡು ಮಾತುಗಳನ್ನಾಗಿ ಪೋಣಿಸುವ ಮಾಸ್ತಿ ಅವರ ನೈಪುಣ್ಯತೆ ಇಲ್ಲಿಯೂ ಅದ್ಭುತವಾಗಿ ವರ್ಕೌಟ್ ಆಗಿದೆ. ಸಂಭಾಷಣೆಯಲ್ಲಿ ಹೊಸ ಪದಗಳನ್ನು ಟಂಕಿಸಿ, ಬಳಸುವ ಇವರ ಚತುರತೆ ‘ಸಿಟಿ ಲೈಟ್ಸ್’ಗೆ ವರವಾಗಿದೆ.

ಸಣ್ಣಪುಟ್ಟ ಕೊರತೆಗಳ ನಡುವೆಯೂ ನೋಡಿಸಿಕೊಂಡು ಹೋಗುವ ಆಪ್ತ ಸಿನಿಮಾ ‘ಸಿಟಿ ಲೈಟ್ಸ್’!

06/09/2026

ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ "ಸಾಧಕರತ್ನ" ಪ್ರಶಸ್ತಿ ನೀಡಿ ಗೌರವಿಸಿದ ಪ್ರಮೋದ್ ಶ್ರೀನಿವಾಸ್ 😍

06/09/2026

ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಬಾಗಿನ ನೀಡಿ ಗೌರವಿಸಿದ ಯುವ ನಾಯಕ ಪ್ರಮೋದ್ ಶ್ರೀನಿವಾಸ್ 😍😲

05/09/2026

ಏಳುಮಲೆ ರಿಲೀಸ್ ಆದ ಮೇಲೆ ಸಿನಿಮಾ ನೋಡಿ ಶಾಕ್ ಆದ ಡೈರೆಕ್ಟರ್ ಚಂದ್ರ ಮೋಹನ್!!

05/09/2026

ನನಗೆ ಇದೇ ಊಟ ಬೇಕು ತಿಂಡಿ ಬೇಕು ಅನ್ನೋ ಹೀರೋಯಿನ್'ಗಳಿಗೆ ಧೀರಜ್ ಟಾಗ್!!

ಆಪ್ತವಾಗುವ ಅ ಡೇಟ್!ಇದು ಪಕ್ಕಾ ಕಾರ್ಪೊರೇಟ್‌ ಯುಗ. ಇಲ್ಲಿ ಸಂಬಂಧಗಳು, ಮನುಷ್ಯತ್ವ ಮತ್ತು ಮಾನವೀಯತೆಗಳೆಲ್ಲಾ ಟಾರ್ಗೆಟ್‌, ಮೀಟಿಂಗ್‌ ಹಾಗೂ ಡೆಡ...
05/09/2026

ಆಪ್ತವಾಗುವ ಅ ಡೇಟ್!

ಇದು ಪಕ್ಕಾ ಕಾರ್ಪೊರೇಟ್‌ ಯುಗ. ಇಲ್ಲಿ ಸಂಬಂಧಗಳು, ಮನುಷ್ಯತ್ವ ಮತ್ತು ಮಾನವೀಯತೆಗಳೆಲ್ಲಾ ಟಾರ್ಗೆಟ್‌, ಮೀಟಿಂಗ್‌ ಹಾಗೂ ಡೆಡ್‌ಲೈನ್‌ಗಳ ಗದ್ದಲದಲ್ಲಿ ಕಳೆದುಹೋಗಿವೆ. ಇನ್ನು ಪ್ರೀತಿಯ ವಿಷಯಕ್ಕೆ ಬಂದರೆ, ಅದಕ್ಕಂತೂ ತೀರಾ ಕಡಿಮೆ ವ್ಯಾಲಿಡಿಟಿ. ಯಾವಾಗ ಬೇಕಾದರೂ ಯಾವ ಸಣ್ಣ ನೆಪಕ್ಕಾದರೂ ಅದು ಎಕ್ಸ್‌ಪೈರ್ ಆಗಿಬಿಡಬಹುದು. ಇಂಥದ್ದೇ ಕಾಂಕ್ರೀಟ್ ಕಾಡಿನಲ್ಲಿ ಬದುಕುವ ಒಬ್ಬ ಅಪ್ಪಟ ಕನ್ನಡಿಗ ಕಾರ್ತಿಕ್. ಟೆಕ್ಕಿಯಾಗಿ ಕೋಡಿಂಗ್ ಜಗತ್ತಿನಲ್ಲೇ ಮುಳುಗಿದ್ದರೂ, ಆತನಿಗೆ ಮನುಷ್ಯರ ಮುಖವಾಡ ಕಳಚಿ ಅವರ ಅಸಲಿ ಮನಸ್ಥಿತಿಗಳನ್ನು ಅರಿಯುವ ವಿಪರೀತ ಕುತೂಹಲ. 'ಯಾರು ಹೇಗೆ?' ಎಂದು ತಿಳಿದುಕೊಳ್ಳುವ ಹಂಬಲಕ್ಕಾಗಿಯೇ ಊರೂರು ಅಲೆಯುವ ನಿರಂತರ ಪ್ರವಾಸಿ.

ಮತ್ತೊಂದೆಡೆ ಕಥಾನಾಯಕಿ—ಕನ್ನಡವನ್ನು ಚೆನ್ನಾಗಿ ಬಲ್ಲ ದೆಹಲಿ ಮೂಲದ ಹುಡುಗಿ ಮೊನಿಷಾ. ಹೈಟು ಕಡಿಮೆ ಇದ್ದರೂ ಮಾತು ಸ್ಟ್ರೈಟು! ಯಾವುದೋ ಕಹಿ ನೆನಪು, ಹೇಳಿಕೊಳ್ಳಲಾಗದ ಮಾನಸಿಕ ಒತ್ತಡದ ಗೂಡಾಗಿರುವ ಈಕೆಯನ್ನು ಹೇಗಾದರೂ ಮಾಡಿ ಒಂದು ದಿನದ ಮಟ್ಟಿಗೆ ಡೇಟ್‌ಗೆ ಕರೆದೊಯ್ದು, ಇಡೀ ಬೆಂಗಳೂರನ್ನು ಸುತ್ತಿಸಬೇಕೆಂಬುದು ಕಾರ್ತಿಕ್‌ನ ಬಯಕೆ. ಅದು ಸಾಧ್ಯವೂ ಆಗುತ್ತದೆ. ಒಲ್ಲದ ಮನಸ್ಸಿನಿಂದಲೇ ಒಪ್ಪಿ ಬೈಕು ಹತ್ತುವ ಮೊನಿಷಾ ಮತ್ತು ಕಾರ್ತಿಕ್‌ ನಡುವೆ ಬೆಳಗಿನ ಬಿಸಿಲಿನಿಂದ ರಾತ್ರಿಯ ಮಬ್ಬು ಕವಿಯುವ ಹೊತ್ತಿಗೆ ಏನೆಲ್ಲಾ ನಡೆಯುತ್ತದೆ? ಅವಳ ಕಣ್ಣಾಲಿಗಳಲ್ಲಿ ಮಡುಗಟ್ಟಿರುವ ಆ ಗತಕಾಲದ ಕಹಿಯೇನು? ಇಬ್ಬರ ಭಾವನೆಗಳು ಹೇಗೆ ಮುಖಾಮುಖಿಯಾಗುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವ ಚಿತ್ರವೇ ‘ಅ ಡೇಟ್’.

ಸಾಫ್ಟ್‌ವೇರ್ ಲೋಕದ ಮಂದಿ ತಮ್ಮ ‘ವೀಕ್‌ಎಂಡ್‌’ ರಜೆಗಳನ್ನು ಬಳಸಿಕೊಂಡು ಸಿನಿಮಾ ಮಾಡಿ ಬಿಡುಗಡೆ ಮಾಡುವುದು ಹೊಸದೇನಲ್ಲ. ಆರಂಭದಲ್ಲಿ ಇದು ಕೂಡ ಅಂಥದ್ದೇ ಮತ್ತೊಂದು ಹವ್ಯಾಸಿ ಪ್ರಯತ್ನವಿರಬಹುದೇ ಎನಿಸುವುದು ಸಹಜ. ಆದರೆ ಕಥೆ ನಿಧಾನಕ್ಕೆ ಗಂಭೀರ ತಿರುವು ಪಡೆದು ಮನಸ್ಸಿನಾಳಕ್ಕಿಳಿಯುತ್ತದೆ. ಇಡೀ ಸಿನಿಮಾದಲ್ಲಿ ಕಣ್ಣಿಗೆ ಕಾಣುವುದು ಕೇವಲ ಎರಡೇ ಪಾತ್ರಗಳು. ಮೂರನೇ ಪಾತ್ರವೊಂದು ಕಥೆಯ ತಿರುವಿಗೆ ಧ್ವನಿಯಾಗಿ ಬರುತ್ತದಾದರೂ, ಅದನ್ನು ನಿರ್ದೇಶಕರು ಪೂರ್ತಿಯಾಗಿ ಪರದೆಯ ಮೇಲೆ ರಿವೀಲ್ ಮಾಡುವುದೇ ಇಲ್ಲ. ಸಿನಿಮಾ ಮುಗಿದ ಮೇಲೆ ಆ ಪಾತ್ರ ಕಣ್ಣಿಗೆ ಕಾಣಿಸದೇ ಇರುವುದೇ ಚಿತ್ರಕಥೆಯ ದೃಷ್ಟಿಯಿಂದ ಸೂಕ್ತ ಎನಿಸುತ್ತದೆ.

ಇವತ್ತಿನ ಕಾಲಘಟ್ಟದಲ್ಲಿ ಮೆಟ್ರೋಪಾಲಿಟನ್ ಸಂಸ್ಕೃತಿಯಲ್ಲಿ ಹುಟ್ಟಿಕೊಳ್ಳುವ ಕಾಂಪ್ಲಿಕೇಟೆಡ್ ಪ್ರೇಮ ಪ್ರಕರಣಗಳು, ಗಂಡು-ಹೆಣ್ಣಿನ ಒಳಗಿನ ಅಗಾಧ ಮನೋವ್ಯಾಕುಲ, ಅಪನಂಬಿಕೆಯ ಕಹಿ, ಕಳೆದುಹೋದ ಬಕುನ ಅಥವಾ ಪ್ರೀತಿ ಮತ್ತೆ ಸಿಕ್ಕಿಬಿಡಬಹುದೇನೋ ಎನ್ನುವ ತೀವ್ರ ಹಪಹಪಿ, ಕೊನೆಗೆ ಅದು ಸಿಗದಿದ್ದಾಗ ಎದುರಾಗುವ ಹತಾಶೆ... ಇವೆಲ್ಲದರ ನಡುವೆ, "ಇಷ್ಟಕ್ಕೇ ಬದುಕು ಮುಗಿದುಹೋಗುವುದಿಲ್ಲ, ಜಗತ್ತು ತುಂಬಾ ವಿಶಾಲವಾಗಿದೆ; ಅದನ್ನು ಕೇವಲ ನೋವಿನ ಒಂದೇ ಹಿಡಿತಕ್ಕೆ ಸಿಲುಕಿಸಿ ಬದುಕಲು ಸಾಧ್ಯವಿಲ್ಲ" ಎಂದು ಬದುಕಿನ ಹೊಸ ದಾರಿಯನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ. ಯಾವುದೇ ಕೃತಕತೆ ಇಲ್ಲದೆ ಜೀವನದ ಕಟು ವಾಸ್ತವವನ್ನು ತೆರೆದಿಟ್ಟಿರುವ ಕಾರಣಕ್ಕೇ ಸಿನಿಮಾ ಕ್ಷಣಕ್ಷಣಕ್ಕೂ ಆಪ್ತವಾಗುತ್ತಾ ಹೋಗುತ್ತದೆ. ಪಾತ್ರಗಳು ‘ಡೈಲಾಗ್’ ಹೊಡೆಯುವುದಿಲ್ಲ; ಬದಲಿಗೆ ಸಹಜವಾಗಿ ಸಂಭಾಷಿಸುತ್ತವೆ. ಅದೇ ಈ ಚಿತ್ರದ ಅತಿ ದೊಡ್ಡ ಶಕ್ತಿ.

ಬೆಂಗಳೂರು ಬರಿಯ ನಗರವಾಗಿ ಉಳಿಯದೆ, ಕಥೆಯ ಮತ್ತೊಂದು ಪಾತ್ರವಾಗಿ ಪ್ರಮುಖ ರಸ್ತೆಗಳಿಂದ ಹಿಡಿದು ಒಳಗಿನ ಪುಟ್ಟ ಗಲ್ಲಿಗಳ ತನಕ ಅತ್ಯುತ್ತಮವಾಗಿ ಸೆರೆಯಾಗಿದೆ. ಅಶ್ವಿನಿ ಶೆಣೈ ಮತ್ತು ಸುಜನೀತ್‌ ಶೆಟ್ಟಿ ತಮ್ಮ ಸಹಜ ಅಭಿನಯದ ಮೂಲಕ ಇಡೀ ಚಿತ್ರವನ್ನು ಎಲ್ಲಿಯೂ ಏಕತಾನತೆ ಕಾಡದಂತೆ ಅಚ್ಚುಕಟ್ಟಾಗಿ ಮುನ್ನಡೆಸಿದ್ದಾರೆ. ಮೊದಲಾರ್ಧ ಸ್ವಲ್ಪ ಮಟ್ಟಿಗೆ ನಿಧಾನಗತಿಯಲ್ಲಿ ಸಾಗಿದಂತೆ ಅನ್ನಿಸಿದರೂ, ದ್ವಿತೀಯಾರ್ಧ ಭಾವನೆಗಳ ತೀವ್ರತೆಯೊಂದಿಗೆ ಸಲೀಸಾಗಿ ತೇಲಿಸುತ್ತದೆ.

ಮೋಕ್ಷ ಬೀಟ್ಸ್ ಅವರ ಸಂಗೀತದಲ್ಲಿ ಎಐ ಬಳಕೆ ಕೊಂಚ ಹೆಚ್ಚೇ ಎದ್ದು ಕಾಣಿಸುವುದು ಅಲ್ಲಲ್ಲಿ ಅಪಸ್ವರದಂತೆ ಭಾಸವಾಗುತ್ತದೆ. ಆದರೆ ವಡ್ಡೆ ದೇವೇಂದರ್‌ ರೆಡ್ಡಿ ಅವರ ಛಾಯಾಗ್ರಹಣ ಅತ್ಯುನ್ನತ ಗುಣಮಟ್ಟದಿಂದ ಕೂಡಿದ್ದು, ಬೆಂಗಳೂರಿನ ಓಡಾಟವನ್ನು ಕಣ್ಣಿಗೆ ಕಟ್ಟುವಂತೆ ಶ್ರೀಮಂತವಾಗಿ ಕಟ್ಟಿಕೊಟ್ಟಿದೆ. ಒಟ್ಟಾರೆಯಾಗಿ, ‘ಅ ಡೇಟ್‌’ ಗದ್ದಲಗಳಿಲ್ಲದ, ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುವ ಒಂದು ಪ್ರಾಮಾಣಿಕ ಹಾಗೂ ಆಪ್ತ ಸಿನಿಮಾ ಪ್ರಯತ್ನ. ಅಷ್ಟರಮಟ್ಟಿಗೆ ನಿರ್ದೇಶಕ ವಿಮಲ್‌ ರಾಜ್‌ ಗೆಲುವು ಸಾಧಿಸಿದ್ದಾರೆ.

05/09/2026

"ಲವ್ ಟುವರ್ಡ್ಸ್ ಫ್ಯಾಮಿಲಿ" ಸಿನಿಮಾಗೆ ನಾಗಾರ್ಜುನ್ ಬರೆದ ಕುಂದಾಪುರದ ಹೆಣ್ಣಿವಳು ಕ್ಯಾಚಿ ಸಾಂಗಿಗೆ ಫುಲ್ ಮಾರ್ಕ್ಸ್ ನೀಡಿದ ಮನೋರಂಜನ್ ರವಿಚಂದ್ರನ್ 😍

05/09/2026

"ಲವ್ TOWARDS ಫ್ಯಾಮಿಲಿ" ಸಿನಿಮಾಗೆ ಕುಂದಾಪುರದ ಹೆಣ್ಣಿವಳು ಎಂಬ ಅದ್ಭುತ ಸಾಂಗ್ ಬರೆದ ಬರಹಗಾರರ ಜೊತೆ ರಾಧೆ ಧೀರಜ್ 😍

05/09/2026

"ಲವ್ TOWARDS ಫ್ಯಾಮಿಲಿ" ಸಿನಿಮಾ ಮೂಲಕ ಮುದ್ದಾದ ರಾಧೆ ಸ್ಯಾಂಡಲ್ ವುಡ್ಡಿಗೆ ಎಂಟ್ರಿ 😍

Address

#13/1, 2nd Floor, 1st Temple Street, 9th Cross, Malleshwaram
Bangalore
560003

Alerts

Be the first to know and let us send you an email when Cinibuzz Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Cinibuzz Kannada:

Shortcuts

Share